ಐರ್ಲೆಂಡ್: ಗ್ರೇಟ್ ಬ್ರಿಟನಿಗೆ ಪಶ್ಚಿಮದಲ್ಲಿ, ಉತ್ತರ ಅಕ್ಷಾಂಶ 510 25' ನಿಂದ 550 23’ಗೂ ಪಶ್ಚಿಮ ರೇಖಾಂಶ 50 25'ನಿಂದ 100 30’ಗೂ ನಡುವೆ ಸೊಟ್ಟಪಟ್ಟ ಹರಳಿನಂತೆ ಹಬ್ಬಿರುವ ದ್ವೀಪ. ಸರಾಸರಿ 176 ಕಿಮೀ ಅಗಲ ಮತ್ತು 352 ಕಿಮೀ ಉದ್ದ ಇರುವ ಇದರ ವಿಸ್ತೀರ್ಣ 70,273 ಚ.ಕಿಮೀ. ಉತ್ತರ ಐರ್ಲೆಂಡ್ ಮತ್ತು ಐರಿಷ್ ಗಣರಾಜ್ಯಗಳೆಂದು ಇದರಲ್ಲಿ ಎರಡು ರಾಜಕೀಯ ವಿಭಾಗಗಳಿವೆ. ಆದರೆ ಐರ್ಲೆಂಡಿನ ಅತ್ಯಂತ ಉತ್ತರದ ಬಿಂದು ಡಾನೆಗಾಲ್ ಇರುವುದು ಉತ್ತರ ಐರ್ಲೆಂಡಿನಲ್ಲಲ್ಲ. ಐರಿಷ್ ಗಣರಾಜ್ಯದಲ್ಲಿ. ಇತಿಹಾಸ ಪ್ರಸಿದ್ಧವಾದ ಆಲ್ಸ್ಟರ್ ಪ್ರಾಂತ್ಯದ ಒಂಬತ್ತು ಕೌಂಟಿಗಳಲ್ಲಿ (ವಿಭಾಗ) ಆರು ಉತ್ತರ ಐರ್ಲೆಂಡಿನಲ್ಲಿವೆ. ಆದ್ದರಿಂದ ಉತ್ತರ ಐರ್ಲೆಂಡನ್ನು ಆಲ್ಸ್ಟರ್ ಎಂದೂ ಕರೆಯುವುದುಂಟು. ಇದು ಸಂಯುಕ್ತ ಪ್ರಭುತ್ವದಲ್ಲಿದೆ (ಯುನೈಟೆಡ್ ಕಿಂಗ್ಡಮ್). ಐರಿಷ್ ಗಣರಾಜ್ಯದಲ್ಲಿ 26 ಕೌಂಟಿಗಳಿವೆ. ಇದು ಸ್ವತಂತ್ರ ಸಾರ್ವಭೌಮ ರಾಜ್ಯ. ಹಚ್ಚ ಹಸುರು ಹಬ್ಬಿರುವ ಐರ್ಲೆಂಡನ್ನು ಪಚ್ಚೆಯ ದ್ವೀಪವೆಂದು ಕರೆಯುವುದುಂಟು. ಅಂಧಕಾರಯುಗದಲ್ಲಿ ಇದು ಜ್ಞಾನ ನಿಷ್ಠೆಗಳ ಕೇಂದ್ರವಾಗಿತ್ತಂತೆ. ಆದ್ದರಿಂದ ಇದನ್ನು ಸಂತರ ಮತ್ತು ಜ್ಞಾನಿಗಳ ದ್ವೀಪವೆಂದು ಸಂಬೋಧಿಸುವುದೂ ಉಂಟು.
ಮೇಲ್ಮೈ ಲಕ್ಷಣ: ಬಟ್ಟಲ ತಟ್ಟೆಯಂತೆ ಸುತ್ತಲೂ ಹರುಕು ಮುರುಕು ಪರ್ವತಗಳು; ನಡುವೆ ಸುಣ್ಣಕಲ್ಲಿನ ಬಂiÀÄಲು. ಇದು ಸ್ಥೂಲವಾಗಿ ಐರ್ಲೆಂಡಿನ ಸ್ವರೂಪ. ಇದರ ಪುರ್ವತೀರ ಸಾಮಾನ್ಯವಾಗಿ ನೇರ, ಸರಳ. ಆದರೆ ಪಶ್ಚಿಮದ್ದು ಹಾಗಲ್ಲ. ಅದು ಅತ್ಯಂತ ಅಂಕುಡೊಂಕು; ಹಲವೆಡೆಗಳಲ್ಲಿ ಕೋರೆದಾಡೆಗಳಂತೆ ಸಮುದ್ರದೊಳಕ್ಕೆ ಚಾಚಿರುವ ಕಡಿದಾದ ಬಂಡೆಗಳಿವೆ. ಅಟ್ಲಾಂಟಿಕ್ ಸಾಗರದ ನೆಲಗೊರೆತಕ್ಕೆ ಇವು ಸಾಕ್ಷಿ. ಈ ಕಾರಣದಿಂದಾಗಿ ಈ ತೀರದಲ್ಲಿ ಅನೇಕ ಖಾರಿಗಳೂ ಕೊಲ್ಲಿಗಳೂ ಸಣ್ಣ ದೊಡ್ಡ ದ್ವೀಪಗಳೂ ವಿಸ್ತಾರ ಭೂಪ್ರದೇಶದೊಂದಿಗೆ ಸೂಕ್ಷ್ಮಸಂಬಂಧ ಮಾತ್ರ ಉಳಿಸಿಕೊಂಡಿರುವ ಪರ್ಯಾಯ ದ್ವೀಪಗಳೂ ಅಸಂಖ್ಯಾತವಾಗಿವೆ. ದ್ವೀಪಗಳ ಪೈಕಿ ಅಚಿಲ್ ಮತ್ತು ಆರನ್ ಅತ್ಯಂತ ದೊಡ್ಡವು. ನೈಋತ್ಯದಂಚಿನಲ್ಲಿರುವ ವ್ಯಾಲೆಂಟಿನ ದ್ವೀಪ ಅಟ್ಲಾಂಟಿಕಾಂತರ ಕಡಲತಂತಿಮಾರ್ಗಗಳ ಮುಖ್ಯಕೇಂದ್ರ, ಹವಾವೀಕ್ಷಣಾಲಯ. ಆಳಗಡಲಿನ ಉತ್ತಮ ಬಂದರುಗಳೂ ಇಲ್ಲಿ ಹಲವುಂಟು. ಮಧ್ಯದ ಮೈದಾನದ ಸುಣ್ಣಕಲ್ಲಿನ ಮೆದುನೆಲವನ್ನು ಕೊರೆದು ಒಳಕ್ಕೆ ಚಾಚಿರುವ ಅಟ್ಲಾಂಟಿಕಿನಿಂದಾಗಿರುವ ಮೂರು ದೊಡ್ಡ ಕೊಲ್ಲಿಗಳೆಂದರೆ ಡಾನೆಗಾಲ್, ಸ್ಲೈಗೋ ಮತ್ತು ಗಾಲ್ವೇ. ಈ ಕೊಲ್ಲಿಗಳಿಂದ ಸಂಭವಿಸಿರುವ ಮೂರು ಪರ್ಯಾಯದ್ವೀಪಗಳು ಡಾನೆಗಾಲ್, ಕಾನೆಮಾರ ಮತ್ತು ಕೆರಿ. ನಡುವಣ ಮೈದಾನ ಪುರ್ವಾಭಿಮುಖವಾಗಿ ಐರಿಷ್ ಸಮುದ್ರದವರೆಗೂ ಹಬ್ಬಿದೆ. ಈ ಭಾಗವೇ ಐರ್ಲೆಂಡಿನ ನಗರಭರಿತ ಪ್ರದೇಶ. ಪುರಾತನ ಕಾಲದಿಂದ ಐರ್ಲೆಂಡಿನ ನಾಗರಿಕತೆ ಹಬ್ಬಿದ್ದು ಇಲ್ಲಿ. ಈ ಮೈದಾನ ಒಂದೇ ಸಮನಾಗಿಲ್ಲ. ಸಮುದ್ರ ಮಟ್ಟಕ್ಕಿಂತ ಸರಾಸರಿ 76 ಮೀ ಎತ್ತರವಿರುವ ಈ ಪ್ರದೇಶದಲ್ಲಿ ವಂಕಿಗಳಂತೆ ಸುತ್ತಿರುವ ಹಲವಾರು ಬೆಟ್ಟಗುಡ್ಡಗಳುಂಟು. ಪುರ್ವಬಿಟ್ಟು ಉಳಿದೆಲ್ಲ ಕಡೆಗಳಲ್ಲೂ ಈ ಪ್ರದೇಶದ ಸುತ್ತ ಪರ್ವತಗಳು ಮುರಿದು ಉಳಿದುಕೊಂಡಿದೆ. ಐರ್ಲೆಂಡಿನ ದಕ್ಷಿಣದಂಚಿನ ಕೆಮ್ಮರಳು ಬಣ್ಣದ ಬೆಟ್ಟಗಳು ಈ ಭಾಗಕ್ಕೆ ಅಪುರ್ವವಾದ ಪರ್ವತಶೋಭೆ ತಂದಿವೆ. ಬಾಯಿನ್ ಮತ್ತು ಷ್ಯಾನನ್ಗಳು ಮೈದಾನದ ಮುಖ್ಯ ನದಿಗಳು. ಷ್ಯಾನನ್ ನದಿ ಘಟ್ಟವಿಳಿದು ಧುಮ್ಮಿಕ್ಕುವಲ್ಲಿ ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ. ಐರ್ಲೆಂಡ್ ಗಣರಾಜಕ್ಕೆ ವಿದ್ಯುತ್ತನ್ನೊದಗಿಸುತ್ತಿರುವುದು ಮುಖ್ಯವಾಗಿ ಇಲ್ಲಿಂದ. ಈ ದೃಷ್ಟಿಯಿಂದ ಉತ್ತರ ಭಾಗದಲ್ಲಿ ಅರ್ನ್ ನದಿ ಮುಖ್ಯವಾದದ್ದು. ಇದು ಉತ್ತರ ಐರ್ಲೆಂಡಿಗೆ ಹರಿಯುವುದ ರಿಂದ ಈ ನದಿ ಸಮುದ್ರಕ್ಕೆ ಧುಮ್ಮಿಕ್ಕುವಲ್ಲಿ ವಿದ್ಯುದುತ್ಪಾದನೆ ಮಾಡಬಹುದಾದರೂ ಐರ್ಲೆಂಡಿನ ಎರಡು ರಾಜಕೀಯ ವಿಭಾಗಗಳ ನಡುವಣ ವ್ಯಾಜ್ಯದಿಂದ ಇದು ಸಾಧ್ಯವಾಗಿಲ್ಲ.

ವಾಯುಗುಣ: ಐರ್ಲೆಂಡ್ ಉತ್ತರ ಅಟ್ಲಾಂಟಿಕ್ ಚಕ್ರಮಾರುತದ ನೇರ ಪ್ರಭಾವಕ್ಕೆ ಒಳಗಾಗಿರುವುದರಿಂದ ಇಲ್ಲಿನ ಹವಾ ಸಾಮಾನ್ಯವಾಗಿ ಹಿತಕರ; ನೈಋತ್ಯದಲ್ಲಿ ಅತ್ಯಂತ ಸಮರ್ಪಕ (450 ಫ್ಯಾ.-590 ಫ್ಯಾ.). ಕಡಲ ಸನಿಹದಲ್ಲಿರುವ ಎತ್ತರ ಪರ್ವತಗಳ ಬಳಿ ಪರಮಾವಧಿ ಮಳೆಯಾಗುತ್ತದೆ (80"). ಮೈದಾನದಲ್ಲಿ ಸಾಧಾರಣ (30"-40"). ಅಕ್ಟೋಬರಿನಿಂದ ಡಿಸೆಂಬರ್ವರೆಗೆ ಮಳೆಗಾಲ. ಪುರ್ವ ತೀರದಲ್ಲಿ ಆಗಸ್ಟಿನಲ್ಲಿ ಪರಮಾವಧಿ ಮಳೆ. ವಸಂತದಲ್ಲಿ ಒಣ ಹವೆ ಇರುವುದರಿಂದ ವ್ಯವಸಾಯಕ್ಕೆ ಅನುಕೂಲವುಂಟು. ಆಕಳುಗಳನ್ನು ಸಾಕಲು ಇಲ್ಲಿನ ವಾಯುಗುಣ ಅತ್ಯಂತ ಪ್ರಶಸ್ತವಾಗಿದೆ.

ಸ್ವಾಭಾವಿಕ ಸಸ್ಯ, ಪ್ರಾಣಿಗಳು: ಇತಿಹಾಸಪುರ್ವಕಾಲದಲ್ಲಿ ಇಲ್ಲಿ ಉತ್ತರ ಪರ್ವತ ವಿನಾ ಉಳಿದೆಲ್ಲ ಪ್ರದೇಶಗಳಲ್ಲೂ ದಟ್ಟ ಕಾಡುಗಳಿದ್ದುವು. ಸುಮಾರು ನಾಲ್ಕುಸಾವಿರ ವರ್ಷಗಳ ಕಾಲದಿಂದಲೂ ಇಲ್ಲಿ ಜನ ದನಕರು ಸಾಕಿಕೊಂಡಿದ್ದಾರೆ. ಆದ್ದರಿಂದ ಕಾಡು ಕಡಿಯುವ ಹವ್ಯಾಸ ಅತಿಯಾಗಿ ಹೆಚ್ಚಿ 17ನೆಯ ಶತಮಾನದ ವೇಳೆಗೆ ಇದು ಸಂಪುರ್ಣವಾಗಿ ನಿರ್ನಾಮವಾಗುವ ಸ್ಥಿತಿಗೆ ಬಂದಿತ್ತು. ಐರ್ಲೆಂಡಿನ ಸಸ್ಯವೈವಿಧ್ಯ ಗ್ರೇಟ್ ಬ್ರಿಟನಿನದಕ್ಕಿಂತ ಕಡಿಮೆ. ಆದರೆ ಐಬೀರಿಯನ್ ಪರ್ಯಾಯದ್ವೀಪಕ್ಕೂ ಉತ್ತರ ಅಮೆರಿಕಕ್ಕೂ ಈ ಪ್ರದೇಶಕ್ಕೂ ಸಂಬಂಧವಿತ್ತೆಂಬುದನ್ನು ಇಲ್ಲಿನ ಸಸ್ಯಗಳೂ ಪ್ರಾಣಿಗಳೂ ಸೂಚಿಸುತ್ತವೆ.

ಜನಸಂಖ್ಯೆ: ಯುರೋಪಿನ ದೇಶಗಳ ಪೈಕಿ ಐರ್ಲೆಂಡ್ ಒಂದರಲ್ಲೇ 19ನೆಯ ಶತಮಾನದ ಉತ್ತರಾರ್ಧದಲ್ಲಿ ಜನಸಂಖ್ಯೆ ಇಳಿಯಿತೆನ್ನಬಹುದು. ಇದಕ್ಕೆ ಕ್ಷಾಮವೂ ಇಲ್ಲಿಂದ ಜನ ಹೊರಕ್ಕೆ ವಲಸೆಹೋದದ್ದೂ ಕಾರಣ. 20ನೆಯ ಶತಮಾನದಲ್ಲಿ ಜನಸಂಖ್ಯೆ ಹೆಚ್ಚುಕಡಿಮೆ ಸ್ಥಿರವಾಗಿದೆ. ಹಳ್ಳಿಗರ ಸಂಖ್ಯೆಯೇ ಹೆಚ್ಚು. ದಕ್ಷಿಣಕ್ಕಿಂತ ಉತ್ತರದಲ್ಲಿ ಪಟ್ಟಣಿಗರ ಸಂಖ್ಯೆ ಹೆಚ್ಚು.
ಉತ್ತರ ಐರ್ಲೆಂಡ್: ಇದು ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತ ಪ್ರಭುತ್ವದ ಒಂದು ರಾಜಕೀಯ ವಿಭಾಗ, ಆಂಟ್ರಿಮ್, ಆರ್ಮಾ, ಡೌನ್, ಫರ್ಮೇನ, ಲಂಡನ್ಡೆರಿ ಮತ್ತು ಟೈರೋನ್ ಕೌಂಟಿಗಳನ್ನೊಳಗೊಂಡಿದೆ. ಇದನ್ನು ಅಲ್ಸ್ಟರ್ ಎಂದೂ ಕರೆಯುವುದುಂಟು. ಆದರೆ ಪ್ರಾಚೀನ ಅಲ್ಸ್ಟರ್ ಪ್ರಾಂತ್ಯದ ಮೂರು ಕೌಂಟಿಗಳು (ಕ್ಯಾವೆನ್, ಡಾನೆಗಾಲ್ ಮತ್ತು ಮನಗೆನ್) ಐರ್ಲೆಂಡ್ ಗಣರಾಜ್ಯಕ್ಕೆ ಸೇರಿವೆ. ಇದರ ಉತ್ತರಕ್ಕೆ ಅಟ್ಲಾಂಟಿಕ್ ಸಾಗರವೂ ಈಶಾನ್ಯ ಮತ್ತು ದಕ್ಷಿಣಕ್ಕೆ ಉತ್ತರ ಕಡಲ್ಗಾಲುವೆಯೂ ಐರಿಷ್ ಸಮುದ್ರವೂ ದಕ್ಷಿಣ ಪಶ್ಚಿಮಗಳಲ್ಲಿ ಐರ್ಲೆಂಡ್ ಗಣರಾಜ್ಯವೂ ಇವೆ. ಇದರ ವಿಸ್ತೀರ್ಣ 14,144 ಚ.ಕಿಮೀ.

1920 ಮತ್ತು 1922ರಲ್ಲಿ ಜಾರಿಗೆ ಬಂದ ಕಾಯಿದೆಗಳ ಪ್ರಕಾರ ಉತ್ತರ ಐರ್ಲೆಂಡಿಗೆ ಪ್ರತ್ಯೇಕ ಸಂಸತ್ತು ಸ್ಥಾಪಿತವಾಗಿವೆ. ದೇಶದ ವಿಭಜನೆಯ ಫಲವಾಗಿ ಇದು ರಾಜಕೀಯ ಕ್ಷೋಭೆಗೆ ಒಳಗಾಯಿತು. ಆಗಿಂದಾಗ್ಗೆ ಹಿಂಸಾತ್ಮಕ ಚಳವಳಿಗಳು ನಡೆಯುತ್ತಿವೆ. (ಪಿ.ಎಚ್.)

ಉತ್ತರ ಐರ್ಲೆಂಡ್ ಸಂಸತ್ತಿನ ಸಭೆಗಳು ಎರಡು : ಸೆನೆಟ್ ಮತ್ತು ಕಾಮನ್ಸ್‌ ಸಭೆ. ಸೆನೆಟಿನಲ್ಲಿ 24 ಚುನಾಯಿತ ಮತ್ತು 2 ಅಧಿಕಾರ ಪ್ರಯುಕ್ತ ಸದಸ್ಯರೂ ಕಾಮನ್ಸ್‌ಸಭೆಯಲ್ಲಿ 52 ಸದಸ್ಯರೂ ಇದ್ದಾರೆ. ಸೆನೆಟಿನ ಸದಸ್ಯರ ಅಧಿಕಾರಾವಧಿ ನಿಗದಿಗೊಳಿಸಲಾಗಿದೆ. ಇವರು ಕಾಮನ್ಸ್‌ ಸಭಾಸದಸ್ಯರಿಂದ ಆಯ್ಕೆ ಹೊಂದುತ್ತಾರೆ. ಕಾಮನ್ಸ್‌ ಸಭೆಯ ಅವಧಿ ಸಾಮಾನ್ಯವಾಗಿ 5 ವರ್ಷ. ರಾಜತ್ವ, ಯುದ್ಧ ಮತ್ತು ಶಾಂತಿವಿಷಯಗಳು, ರಕ್ಷಣಾಪಡೆಗಳು, ಕೌಲುಗಳು, ಬಿರುದುಗಳು, ರಾಷ್ಟ್ರದ್ರೋಹ ಮುಂತಾದವು ಸಂಯುಕ್ತ ಪ್ರಭುತ್ವದ ಸಂಸತ್ತಿಗೆ ಮೀಸಲಾದ ವಿಷಯಗಳು. ಇವನ್ನು ಬಿಟ್ಟು ಉಳಿದೆಲ್ಲ ವಿಚಾರಗಳಲ್ಲೂ ಇಲ್ಲಿನ ಸಂಸತ್ತಿಗೆ ಅಧಿಕಾರವುಂಟು. ರಾಣಿಯ ಪ್ರತಿನಿಧಿಯಾಗಿ ಆಳುವವನು ಗವರ್ನರ್. ಜವಾಬ್ದಾರಿ ತತ್ತ್ವದ ತಳಹದಿಯ ಮೇಲೆ ರಚಿತವಾದ ಮಂತ್ರಿ ಸಂಪುಟವಿದೆ.   (ಎಂ.ಎಲ್.ಆರ್.)

ವ್ಯವಸಾಯ ಇಲ್ಲಿನ ಮುಖ್ಯ ಕಸಬು. ಹಿಡುವಳಿಗಳು ಸಣ್ಣವು. ಬಾರ್ಲಿ, ಓಟ್ಸ್‌, ಆಲೂಗೆಡ್ಡೆ, ಗೋದಿ, ಟರ್ನಿಪ್-ಇವು ಮುಖ್ಯ ಬೆಳೆಗಳು. ಹಂದಿ, ದನಕರು, ಕುರಿ, ಕೋಳಿ ಮುಖ್ಯ ಸಾಕುಪ್ರಾಣಿಗಳು.

ಉತ್ತರ ಐರ್ಲೆಂಡಿನ ಖನಿಜಗಳು ಅಲ್ಪ, ಜವಳಿ ಮತ್ತು ಎಂಜಿನಿಯರಿಂಗ್ ಕೈಗಾರಿಕೆಗಳು ಮುಖ್ಯ. ಹೊಸ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ನೆರವು ನೀಡುತ್ತಿದೆ. ಐರ್ಲೆಂಡಿನ ಆಮದು ವ್ಯಾಪಾರದಲ್ಲಿ ಮುಕ್ಕಾಲು ಭಾಗವು ರಫ್ತಿನಲ್ಲಿ ಶೇ. 90 ಭಾಗವೂ ಗ್ರೇಟ್ ಬ್ರಿಟನಿನೊಂದಿಗೆ ನಡೆಯುತ್ತದೆ. ರಾಜಧಾನಿ ಬೆಲ್ಫಾಸ್ಟ್‌. ಇದರ ಜನಸಂಖ್ಯೆ 3,99,270 (2001). ಲಂಡನ್ಡೆರಿಯ ಜನಸಂಖ್ಯೆ 55,681.

ಐರ್ಲೆಂಡ್ ಗಣರಾಜ್ಯ: ಉತ್ತರ ಐರ್ಲೆಂಡಿನ 6 ಕೌಂಟಿಗಳನ್ನು ಬಿಟ್ಟು ಉಳಿದ 26 ಕೌಂಟಿಗಳು ಇದಕ್ಕೆ ಸೇರಿವೆ. 1922-1937ರ ವರೆಗೆ ಇದಕ್ಕೆ ಐರಿಷ್ ಸ್ವತಂತ್ರ ರಾಜ್ಯ ಎಂಬ ಹೆಸರಿತ್ತು. 1937ರ ಸಂವಿಧಾನದ ಪ್ರಕಾರ ಇದರ ಹೆಸರು ಐರ್.ದಕ್ಷಿಣ ಐರ್ಲೆಂಡ್ ಎಂದೂ ಇದನ್ನು ಬಳಕೆಮಾತಿನಲ್ಲಿ ಕರೆಯುವುದುಂಟು. ಆದರೆ ಐರ್ಲೆಂಡಿನ ಅತ್ಯಂತ ಉತ್ತರ ಭಾಗ ಇದಕ್ಕೆ ಸೇರಿದೆ. ಇದಕ್ಕೆ ಉತ್ತರ, ವಾಯವ್ಯ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಅಟ್ಲಾಂಟಿಕ್ ಸಾಗರವೂ ಆಗ್ನೇಯದಲ್ಲಿ ಸೇಂಟ್ ಜಾರ್ಜ್ ಕಡಲ್ಗಾಲುವೆಯೂ ಪುರ್ವದಲ್ಲಿ ಐರಿಷ್ ಸಮುದ್ರವೂ ಈಶಾನ್ಯದಲ್ಲಿ ಉತ್ತರ ಐರ್ಲೆಂಡೂ ಇವೆ. ಲೆನ್ಸ್‌ಟರ್, ಮನ್ಸ್‌ಟರ್ ಕನ್ನಾಟ್ ಮತ್ತು ಅಲ್ಸ್‌ಟರ್ ಎಂಬ ನಾಲ್ಕು ಪ್ರಾಂತ್ಯಗಳಿಂದ ಕೂಡಿರುವ ಈ ದೇಶದ ವಿಸ್ತೀರ್ಣ 70,273 ಚ.ಕಿಮೀ. ಜನಸಂಖ್ಯೆ 39,26,000 (2002).

1918 ಡಿಸೆಂಬರಿನಲ್ಲಿ ಚುನಾವಣೆಗೊಂಡು 1919ರಲ್ಲಿ ಸಮಾವೇಶವಾಗಿದ್ದ ಈ ದೇಶದ ಸ್ವಾತಂತ್ರ್ಯವನ್ನು ರಾಷ್ಟ್ರೀಯ ಸಂಪತ್ತು 1919 ಜನವರಿಯಲ್ಲಿ ಸಾರಿಕೊಂಡಿತಾದರೂ ಬ್ರಿಟಿಷ್ ಕಾಯಿದೆಯ ಪ್ರಕಾರ ಇದು ಸಂಯುಕ್ತ ಪ್ರಭುತ್ವದ ಭಾಗವಾಗಿಯೇ ಮುಂದುವರಿಯಿತು. ಉತ್ತರ ದಕ್ಷಿಣ ಐರ್ಲೆಂಡುಗಳಿಗೆ ಪ್ರತ್ಯೇಕ ಸಂಸತ್ತುಗಳನ್ನು ಸ್ಥಾಪಿಸುವ ಕಾಯಿದೆ ಜಾರಿಗೆ ಬಂದದ್ದು 1920ರಲ್ಲಿ. 1921ರಲ್ಲಿ ಉತ್ತರ ಐರ್ಲೆಂಡಿನ ಸಂಸತ್ತಿನ ಚುನಾವಣೆ ನಡೆಯಿತು. ಐರ್ಲೆಂಡಿನ ಉಳಿದ ಭಾಗದಲ್ಲಿ ಈ ಕಾಯಿದೆ ಜಾರಿಗೆ ಬರಲಿಲ್ಲ. 1921 ಡಿಸೆಂಬರ್ 6ರಂದು ಗ್ರೇಟ್ ಬ್ರಿಟನ್ ಐರ್ಲೆಂಡಿಗಳು ಪ್ರತಿನಿಧಿಗಳ ನಡುವೆ ಒಡಂಬಡಿಕೆಯಾಗಿ, ಐರ್ಲೆಂಡ್ ಗಣರಾಜ್ಯಕ್ಕೆ ಒಳರಾಜ್ಯದ (ಡೊಮಿನಿಯನ್) ಸ್ಥಾನ ಲಭಿಸಿತು. ಉತ್ತರ ಐರ್ಲೆಂಡಿಗೆ ಇದರಿಂದ ಹೊರಬರುವ ಅವಕಾಶ ಕೊಡಲಾಯಿತು. ಐರಿಷ್ ಸ್ವತಂತ್ರರಾಜ್ಯ ಉದಯವಾದದ್ದು ಹೀಗೆ. ಕ್ರಮೇಣ ಇದು ಸಂಯುಕ್ತ ಪ್ರಭುತ್ವ ದೊಂದಿಗೆ ಸಂಬಂಧ ಕಡಿದುಕೊಂಡಿತು. ಇದು ಐರಿಷ್ ಗಣರಾಜ್ಯವಾದದ್ದು 1937ರಲ್ಲಿ.

ಐರಿಷ್ ಗಣರಾಜ್ಯದ ಸಂಸತ್ತಿನ ಎರಡು ಸಭೆಗಳಲ್ಲಿ ಒಂದು ಪ್ರತಿನಿಧಿ ಸಭೆ; ಇನ್ನೊಂದು ಸೆನೆಟ್. ಐರಿಷ್ ಇಲ್ಲಿನ ಪ್ರಥಮ ಅಧಿಕೃತ ಭಾಷೆ; ಇಂಗ್ಲಿಷ್ ಎರಡನೆಯದು. 
ಕೃಷಿಯೇ ಜನರ ಮುಖ್ಯ ಕಸಬು. ಒಣಹುಲ್ಲು, ಟರ್ನಿಪ್, ಆಲೂಗೆಡ್ಡೆ, ಸಕ್ಕರೆ, ಬೀಟ್, ಬಾರ್ಲಿ, ಓಟ್ಸ್‌, ಗೋದಿ-ಇವು ಮುಖ್ಯ ಬೆಳೆಗಳು. ಆಕಳು, ಕುರಿ, ಹಂದಿ ಮುಖ್ಯ ಪ್ರಾಣಿಗಳು. ಮೀನುಗಾರಿಕೆಯೂ ಮುಖ್ಯ ಉದ್ಯೋಗ.

ಇಲ್ಲಿ ಖನಿಜಸಂಪತ್ತು ಅಷ್ಟಿಲ್ಲ. ಜಿಪ್ಸಮ್, ಅಮೃತಶಿಲೆ, ಸ್ಲೇಟ್, ಸುಣ್ಣಕಲ್ಲು, ಕಲ್ಲಿದ್ದಲು, ತಾಮ್ರ, ಕಬ್ಬಿಣ, ಸೀಸ, ಬೆರೈಟೀಸ್ ಸಿಗುತ್ತವೆ. ಆಹಾರ, ಹೊಗೆಸೊಪ್ಪು, ಪಾನೀಯ, ಕಾಗದ, ವಿದ್ಯುದುಪಕರಣ, ಜವಳಿ, ರಸಾಯನ ವಸ್ತು-ಈ ಕೈಗಾರಿಕೆಗಳು ಬೆಳೆಯುತ್ತಿವೆ. ವಿದೇಶೀ ವ್ಯಾಪಾರ ಹೆಚ್ಚಾಗಿ ಗ್ರೇಟ್ಬ್ರಿಟನ್, ಕೆನಡ, ಬೆಲ್ಜಿಯಂ ಮತ್ತು ಲಕ್ಸೆಂಬರ್ಗ್ಗಳೊಡನೆ ನಡೆಯುತ್ತದೆ. ಡಬ್ಲಿನ್ ರಾಜಧಾನಿ (ಜನಸಂಖ್ಯೆ 5,68,772), ಕಾರ್ಕ್ (1,22,146), ಲಿಮರಿಕ್ (55,912), ವಾಟರ್ಫರ್ಡ್ (29,842) ಮತ್ತು ಗಾಲ್ವೇ (24,597) ಇತರ ಪಟ್ಟಣಗಳು.                                              (ಪಿ.ಎಚ್.; ಪಿ.ಎಂ.ಯು.ಎಸ್.)

ಐರ್ಲೆಂಡಿನ ಇತಿಹಾಸ: ಐರ್ಲೆಂಡಿನ ಅತ್ಯಂತ ಪ್ರಾಚೀನ ಇತಿಹಾಸ ಅದರ ಪುರಾಣಗಳಲ್ಲೂ ದಂತಕತೆಗಳಲ್ಲೂ ಹುದುಗಿಹೋಗಿದೆ. ಕೆಲ್ಟರು ಇಲ್ಲಿಗೆ ಬರುವ ಮೊದಲೇ ಇಲ್ಲಿ ನವಶಿಲಾಯುಗದ ಜನ ಅಧಿಕ ಸಂಖ್ಯೆಯಲ್ಲಿ ಇದ್ದಿರಬೇಕು. ಅನಂತರವೂ ಅವರು ಇಲ್ಲಿ ವಾಸವಾಗಿದ್ದರೆಂಬುದಕ್ಕೆ ಆಧಾರಗಳಿವೆ. ಇತರ ದೇಶಗಳಿಗಿಂತ ಇಲ್ಲಿ ಈ ಎರಡು ಜನಾಂಗಗಳೂ ಹೆಚ್ಚಾಗಿ ಬೆರೆತುವು. ಪ್ರ.ಶ.ಪು.6ನೆಯ ಶತಮಾನದಲ್ಲೂ ಮತ್ತೆ 3ನೆಯ ಶತಮಾನದಲ್ಲೂ ಕೆಲ್ಟರು ಇಲ್ಲಿ ಅಧಿಕ ಸಂಖ್ಯೆಯಲ್ಲಿ ನೆಲಸಿದರು. ಕ್ರಿಸ್ತಶಕೆಯ ಆದಿಯ ವೇಳೆಗೆ ಇವರ ಜೊತೆಗೆ ಪಿಕ್ಟರೂ ಸೇರಿಕೊಂಡಿದ್ದರು. ಬಹುಶಃ ಇವರು ಸ್ಕಾಟ್ಲೆಂಡಿನಿಂದ ಬಂದವರು. ಪ್ರ.ಶ. 4-5ನೆಯ ಶತಮಾನಗಳ ಸುಮಾರಿನಲ್ಲಿ ಐರಿಷರು ವೇಲ್ಸಿನಲ್ಲಿ ವಸಾಹತು ನಿರ್ಮಿಸಿದ್ದರು.
ಉತ್ತರದಲ್ಲಿ ಇರ್ ವಂಶದ ದೊರೆಗಳು ರಾಜ್ಯ ಸ್ಥಾಪಿಸಿದಾಗ (ಪ್ರ.ಶ.ಪು.300) ಐರ್ಲೆಂಡಿನ ಇತಿಹಾಸದ ಉದಯವಾಯಿತು. ಟೇರ, ಲೆನ್ಸ್‌ಟರ್ ಮತ್ತು ಮನ್ಸ್‌ಟರ್-ಈ ಮೂರು ವಂಶಗಳ ಅರಸರು ಇಡೀ ಐರ್ಲೆಂಡಿನ ನಾನಾ ಭಾಗಗಳನ್ನಾಳುತ್ತಿದ್ದರಲ್ಲದೆ, ಪರಮಾಧಿಕಾರಕ್ಕಾಗಿ ತಮ್ಮತಮ್ಮಲ್ಲೆ ಬಹುಕಾಲ ಕಚ್ಚಾಡಿದರು. 4ನೆಯ ಶತಮಾನದಲ್ಲಿ ಟೇರ ದೊರೆಗಳು ಬಹಳ ಪ್ರವರ್ಧಮಾನಕ್ಕೆ ಬಂದಿದ್ದರು. ಇವರ ಸೇನೆಗಳು ಯುರೋಪ್ಖಂಡ ಪ್ರದೇಶದ ಮೇಲೆ ಕೂಡ ಏರಿಹೋಗಿದ್ದುವು. 

ಐರ್ಲೆಂಡಿಗೆ ಕ್ರೈಸ್ತಧರ್ಮ ಬಂದ ಸಂದರ್ಭದಲ್ಲಿ ಅಲ್ಲಿದ್ದ ಪ್ರಭುತ್ವಗಳ ಪೈಕಿ ಮುಖ್ಯವಾದವು ನಾಲ್ಕು. ಅವುಗಳ ಒಕ್ಕೂಟಗಳ ಒಡೆಯನೇ ಅಧಿರಾಜ (ಹೈಕಿಂಗ್). ಈ ಸ್ಥಾನ ಕೇವಲ ನಾಮಮಾತ್ರ. ಕೆಲವು ಸ್ವತಂತ್ರರಾಜ್ಯಗಳು ಇದನ್ನು ಒಪ್ಪಿರಲಿಲ್ಲ. 

ಐರ್ಲೆಂಡಿನ ಪುರಾತನ ಧರ್ಮ ಯಾವುದೆಂಬುದು ಸ್ಪಷ್ಟವಾಗಿಲ್ಲ. ಇಲ್ಲಿನ ಜನ ಆಗ ಅನೇಕ ದೇವರುಗಳನ್ನು ಆರಾಧಿಸುತ್ತಿದ್ದರು. ಪುಜಾರಿಗಳ ಪ್ರಭಾವ ಹೆಚ್ಚಿನದಾಗಿತ್ತು. ಜನರ ದೃಷ್ಟಿಯಲ್ಲಿ ಅವರು ಪವಾಡ ಪುರುಷರು.

ಸೇಂಟ್ ಪ್ಯಾಟ್ರಿಕ್ ಇಲ್ಲಿಗೆ ಬರುವ ವೇಳೆಗೆ (432) ಐರಿಷ್ ಜನ ನಾಗರಿಕತೆಯ ಎತ್ತರದ ಹಂತವನ್ನೇರಿದ್ದರು. ಯುರೋಪಿನ ಬಹುಭಾಗ ಕತ್ತಲಲ್ಲಿ ಅಡಗಿದ್ದಾಗ ಈ ಜನ ಉಪಾಧ್ಯಾಯರಿಗೂ, ಕವಿಗಳಿಗೂ, ಚರಿತ್ರಕಾರರಿಗೂ ಹೆಚ್ಚಿನ ಗೌರವ ಸಲ್ಲಿಸುತ್ತಿದ್ದರು. ಪ್ರಸಕ್ತಶಕೆಗೂ ಹಲವು ಶತಮಾನಗಳ ಹಿಂದೆಯೇ ಅಲ್ಲಿ ಕೇಂದ್ರೀಯ ಸಂಸತ್ತಿತ್ತು. ಇದು ವರ್ಷಕ್ಕೆ ಮೂರು ಸಾರಿ ಸಭೆ ಸೇರುತ್ತಿತ್ತು. ಉಪಾಧ್ಯಾಯರೂ ನ್ಯಾಯಮೂರ್ತಿಗಳೂ ಪುರೋಹಿತರೂ ನಾನಾ ಗುಂಪುಗಳ ನಾಯಕರೂ ಇಲ್ಲಿಗೆ ಬಂದು ಶಾಸನ ಮಾಡುತ್ತಿದ್ದರು; ನ್ಯಾಯ ತೀರ್ಪು ನೀಡುತ್ತಿದ್ದರು. ಅಂದಿನ ನ್ಯಾಯಗಳಿಗೆ ಬ್ರೀಹಾನ್ ನ್ಯಾಯಗಳೆಂದು ಹೆಸರು. ಆಧುನಿಕ ನ್ಯಾಯ ವಿದ್ಯಾರ್ಥಿಗಳ ಮನ್ನಣೆಗೂ ಇವು ಪಾತ್ರವಾಗಿವೆ.

4-8ನೆಯ ಶತಮಾನದವರೆಗಿನ ಐರಿಷ್ ರಾಜಕೀಯ ಇತಿಹಾಸ ಅವಿರತ ಗುಂಪುಯುದ್ಧಗಳ ಕಂತೆಬೊಂತೆ. ಚರ್ಚು- ಅಷ್ಟೇನೂ ಪ್ರಭಾವಶಾಲಿಯಾಗಿರಲಿಲ್ಲ. ಅನೇಕವೇಳೆ ಅದೂ ಈ ಜಗಳದಲ್ಲಿ ಪಕ್ಷವಹಿಸುತ್ತಿತ್ತು. 

ನಾರ್ಸ್ ಜನ ಐರ್ಲೆಂಡಿನ ಮೇಲೆ ಆಕ್ರಮಣ ನಡೆಸಿದ್ದು 8ನೆಯ ಶತಮಾನದ ಕೊನೆಯಲ್ಲಿ. ಮೊದಲು ನಾರ್ವೀಜಿಯನರೂ ಅನಂತರ ಡೇನರೂ ಅಲ್ಲಿಗೆ ಬಂದರು. ಇದು ಐರ್ಲೆಂಡಿನ ಮೇಲೆ ಪರೋಕ್ಷವಾಗಿ ಒಳ್ಳೆಯ ಪರಿಣಾಮವನ್ನೇ ಉಂಟುಮಾಡಿತೆನ್ನಬಹುದು. ಐರ್ಲೆಂಡಿನ ಜನ ಪರಕೀಯರ ಸೇನೆಗಳಲ್ಲಿ ಯೋಧರಾಗಿ ಯುದ್ಧವಿದ್ಯೆ ಕಲಿತರು. ಯುರೋಪಿನೊಂದಿಗೆ ಇವರ ಸಂಪರ್ಕ ಬೆಳೆಯಿತು. ವ್ಯಾಪಾರ ಕುದುರಿತು. 10ನೆಯ ಶತಮಾನದಲ್ಲಿ ಬ್ರಿಯಾನ್ ಬೊರೊಯಿಮೆಹಿ ಪ್ರಬಲನಾದ. ಈ ಐರಿಷ್ ದೊರೆ ಡೇನರನ್ನು ಬಗ್ಗುಬಡಿದು ಪರಮಾಧಿಕಾರ ಪಡೆದ. 1002ರಿಂದ 12 ವರ್ಷಕಾಲ ನಡೆದ ಈತನ ಆಡಳಿತ ಶ್ರೇಯಕಾರಕವಾಗಿತ್ತು. 1014ರಲ್ಲಿ ನಡೆದ ಯುದ್ಧದಲ್ಲಿ ಡೇನರ ರೆಕ್ಕೆ ಮತ್ತೆ ಮುರಿಯಿತು. ಆದರೆ ಕಾಳಗದಲ್ಲಿ ಬ್ರಿಯಾನ್ ಮಡಿದ. ಇದರಿಂದ ಐರ್ಲೆಂಡಿನ ಕೇಂದ್ರಶಕ್ತಿ ಮತ್ತೆ ಉಡುಗಿಹೋಯಿತು. ಮುಂದಿನ ಒಂದು ಶತಮಾನಕಾಲದಲ್ಲಿ ಒಳಜಗಳ ಹೆಚ್ಚಿತು.

4-12ನೆಯ ಶತಮಾನದವರೆಗಿನ ಕಾಲದಲ್ಲಿ ಐರ್ಲೆಂಡು ಸಾಮಾಜಿಕವಾಗಿ ಅಷ್ಟೇನೂ ಮುಂದುವರಿಯಲಿಲ್ಲ. ಊಳಿಗಮಾನ್ಯ ಪದ್ಧತಿ ಬೆಳೆಯಿತಾದರೂ ಹಳೆಯ ಗುಂಪು ಜೀವನವೂ ಬ್ರೀಹಾನ್ ನ್ಯಾಯಪದ್ಧತಿಯೂ ಮುಂದುವರಿದುವು.

ನಾರ್ಮನ್ ದೊರೆ ಎರಡನೆಯ ಹೆನ್ರಿ 1172ರಲ್ಲಿ ಐರ್ಲೆಂಡಿನ ಮೇಲೆ ಪ್ರಭುತ್ವ ಸ್ಥಾಪಿಸಿ ತನ್ನ ರಾಜ್ಯಪಾಲನನ್ನು ಅಲ್ಲಿಗೆ ನೇಮಿಸಿದ. ಒಂದನೆಯ ಹಾಗೂ ಎರಡನೆಯ ಎಡ್ವರ್ಡರ ಕಾಲದಲ್ಲಿ ಇದರ ಮೇಲೆ ಇಂಗ್ಲಿಷರ ಹಿಡಿತ ಹೆಚ್ಚಾಯಿತು. ಐರಿಷರು ಆಂಗ್ಲೋ-ನಾರ್ಮನರೊಂದಿಗೆ ವಿವಾಹಸಂಬಂಧ ಬೆಳೆಸಕೂಡದೆಂದು ಮೂರನೆಯ ಎಡ್ವರ್ಡ್ ದೊರೆಯ ಕಾಲದಲ್ಲಿ ಕಾನೂನೊಂದು ಜಾರಿಗೆ ಬಂತು.

ಐರ್ಲೆಂಡಿನ ಶಾಸನ ಸಭೆಯನ್ನು ಇಂಗ್ಲಿಷ್ ಆಡಳಿತ ಮಂಡಲಿಯ ಅಧೀನಕ್ಕೆ ಒಳಪಡಿಸುವ ಕಾಯಿದೆಯಾದದ್ದು (1494) ಏಳನೆಯ ಹೆನ್ರಿಯ ಕಾಲದಲ್ಲಿ. ಆ ವೇಳೆಗೆ ಅಲ್ಲಿದ್ದ ಆಂಗ್ಲೋ-ನಾರ್ಮನ್ ಸಂಸಾರಗಳು ಸಂಪುರ್ಣವಾಗಿ ಐರಿಷ್ ಆಗಿ ಪರಿವರ್ತಿತ ವಾಗಿದ್ದುವು. ಗುಂಪಿನ ಕಟ್ಟಳೆಗಳಿಗೇ ಅವು ಬದ್ಧವಾಗಿದ್ದುವು. ಹೆನ್ರಿ ದೊರೆ ಅಲ್ಲಿನ ಗುಂಪುನಾಯಕರ ಅಧಿಕಾರ ಮುರಿದು ತಾನೇ ಐರ್ಲೆಂಡಿನ ದೊರೆಯೆಂದು ಸಾರಿಕೊಂಡ.

ಮೊದಲನೆಯ ಎಲಿಜ಼ಬೆತ್ ಐರ್ಲೆಂಡನ್ನು ಸಂಪುರ್ಣವಾಗಿ ಅಧೀನಕ್ಕೊಳಪಡಿಸಿ ಕೊಳ್ಳಬೇಕೆಂದು ಹೆಣಗಿದಳು, ಧರ್ಮವಿಧಿ, ಸಾಮಾಜಿಕ ಕಟ್ಟಳೆ, ಭಾಷೆ ಮುಂತಾದ ಎಲ್ಲ ವಿಚಾರಗಳಲ್ಲೂ ಅದು ಇಂಗ್ಲೆಂಡಿನಂತಾಗಬೇಕೆಂಬುದು ಆಕೆಯ ಬಯಕೆ. ಇದನ್ನು ವಿರೋಧಿಸಿದ ಜನ ಶಿಕ್ಷೆಗೆ ಒಳಗಾದರು. ಇಂಗ್ಲೆಂಡಿನ ಉಪಾಯಗಳೆಲ್ಲ ಐರ್ಲೆಂಡನ್ನು ಶಾಶ್ವತ ದಾಸ್ಯಕ್ಕೊಳಪಡಿಸುವ ಹಂಚಿಕೆಗಳೆಂಬ ಅರಿವು ಮೂಡಿದಾಗ ಅಲ್ಲಿನ ಜನ ಒಗ್ಗಟ್ಟಾದರು. ಕೆಥೋಲಿಕ್ ಧರ್ಮಪ್ರೇಮ, ದೇಶಪ್ರೇಮ-ಇವೆರಡೂ ಈ ಒಗ್ಗಟ್ಟಿನ ಅಡಿಗಲ್ಲುಗಳಾದುವು. ಹೀಗಾಗಿ ಎಲಿಜ಼ಬೆತ್ ಐರ್ಲೆಂಡಿನ ವಿರೋಧವನ್ನೆ ಕಟ್ಟಿಕೊಂಡಳೆನ್ನಬಹುದು.

ಐರಿಷರು ಪದೇ ಪದೇ ದಂಗೆ ಏಳುತ್ತಿದ್ದರು. ಸ್ಪೇನ್, ಇಟಲಿಗಳು ಇವರಿಗೆ ಸಹಾಯ ನೀಡಿದುವು (1579-83). ಇಂಗ್ಲಿಷರು ದಂಗೆ ಅಡಗಿಸಲು ಅನುಸರಿಸಿದ ವಿಧಾನ ಅತ್ಯಂತ ಕ್ರೌರ್ಯಮಯ. ಐರಿಷರು ಕಾಡುಜನರೆಂಬುದು ಇಂಗ್ಲಿಷರ ನಂಬಿಕೆಯಾಗಿತ್ತು. ಐರಿಷರ ಬಗ್ಗೆ ಅವರು ಯಾವ ಕಾಲದಲ್ಲೂ ಸೌಜನ್ಯದಿಂದ ನಡೆದುಕೊಳ್ಳಲಿಲ್ಲ.
ಇಂಗ್ಲೆಂಡಿನಲ್ಲಿ ಒಂದನೆಯ ಚಾರಲ್ಸ್‌ ದೊರೆಯ ಮರಣದಂಡನೆಯಿಂದ ಐರ್ಲೆಂಡ್ ಸ್ವತಂತ್ರವಾಗಲು ಮತ್ತೊಂದು ಅವಕಾಶ ಸಿಕ್ಕಿತು. ಆದರೆ ಅನಂತರ ಬಂದ ಕ್ರಾಮ್ವೆಲನ ಕಟ್ಟುನಿಟ್ಟಿನ ಆಡಳಿತಕಾಲದಲ್ಲಿ ಐರಿಷರು ಬಲವಾದ ಪೆಟ್ಟಿಗೆ ಈಡಾದರು. ಅಲ್ಲಿನ ಕೆಥೋಲಿಕರು ಅನುಭವಿಸಬೇಕಾಗಿದ್ದ ಕೋಟಲೆ ಅಷ್ಟಿಷ್ಟಲ್ಲ. 

1688ರ ಕ್ರಾಂತಿಯ ಪರಿಣಾಮವಾಗಿ ಉತ್ತರ ಐರ್ಲೆಂಡಿನಲ್ಲಿ ಕೆಥೋಲಿಕರಿಗೂ ಪ್ರಾಟೆಸ್ಟಂಟರಿಗೂ ಕಾದಾಟ ಪ್ರಾರಂಭವಾಯಿತು. ಬಹುಕಾಲ ಅನಿಶ್ಚಿತತೆಯಿತ್ತು. ಮತ್ತೆ ಅವರು ಸೋಲನ್ನನುಭವಿಸಿದರು.

ಫ್ರಾನ್ಸಿನ ಮಹಾಕ್ರಾಂತಿಯಿಂದ ಐರ್ಲೆಂಡಿನ ಜನರಲ್ಲಿ ಮತ್ತೆ ಉತ್ಸಾಹ ಮೂಡಿತು. ಸಂಯುಕ್ತ ಐರಿಷ್ ಜನ ಎಂಬ ಸಂಸ್ಥೆ ಸ್ಥಾಪಿತವಾಯಿತು. ಐರ್ಲೆಂಡನ್ನು ಹೇಗಾದರೂ ತನ್ನ ಕೈಯಲ್ಲಿಟ್ಟುಕೊಳ್ಳಲು ಇಂಗ್ಲೆಂಡ್ ಪಟ್ಟ ಸಾಹಸ ಅಷ್ಟಿಷ್ಟಲ್ಲ. ಇಂಗ್ಲೆಂಡಿನ ಪಾರ್ಲಿಮೆಂಟು ಜಾರಿಗೆ ತಂದ ಒಕ್ಕೂಟ ಕಾಯಿದೆಯ ಪ್ರಕಾರ (1800) ಪ್ರಾತಿನಿಧ್ಯ ನಿಗದಿಯಾಯಿತು. ಆದರೆ ಕೆಥೋಲಿಕರಿಗೆ ಅವಕಾಶ ದೊರಕಿದ್ದು 1829ರಲ್ಲಿ ಮಾತ್ರ.

17-18ನೆಯ ಶತಮಾನಗಳಲ್ಲಿ ಐರಿಷ್ ರೈತರ ಮುಖ್ಯ ಆಹಾರ ಆಲೂಗೆಡ್ಡೆಯಾಗಿತ್ತು. 1846ರಲ್ಲಿ ಆಲೂಗೆಡ್ಡೆಯ ಕ್ಷಾಮ ಉಂಟಾದಾಗ ಅನೇಕ ಸಾವಿರ ಐರಿಷ್ ಜನ ಸತ್ತರು. ವಿಶ್ವದ ಧಾನ್ಯ ಮಾರುಕಟ್ಟೆಯಲ್ಲಿ ಅಮೆರಿಕನ್ ಸ್ಪರ್ಧೆ ಆರಂಭವಾದ್ದರಿಂದಲೂ ಇಂಗ್ಲೆಂಡು ಆಗ ನಿರಾತಂಕ ವ್ಯಾಪಾರದಲ್ಲಿ ನಂಬಿಕೆಯಿಟ್ಟಿದ್ದರಿಂದಲೂ ಐರ್ಲೆಂಡಿನ ಧಾನ್ಯಕ್ಕೆ ಸರಿಯಾದ ರಕ್ಷಣೆಯಿಲ್ಲದೆ, ಧಾರಣೆಗಿಟ್ಟದೆ, ಅಲ್ಲಿನ ಜನ ನಷ್ಟಕ್ಕೊಳಗಾದರು. ಈ ಕಾಲದಲ್ಲಿ ಅಮೆರಿಕಕ್ಕೆ ವಲಸೆ ಹೋದವರು ಎಷ್ಟೋ ಜನ. ರಾಜಕೀಯ ಆಂದೋಲನವೂ ಬಲವಾಯಿತು. ಐರ್ಲೆಂಡಿನ ಸ್ವಯಂ ಆಡಳಿತಕ್ಕಾಗಿ ಪಾರ್ಲಿಮೆಂಟಿನ ಮುಂದೆ 1886ರಲ್ಲೂ 1893ರಲ್ಲೂ ಬಂದ ಮಸೂದೆಗಳು ಅಂಗೀಕೃತವಾಗಲಿಲ್ಲ. 1914ರಲ್ಲಿ ತಂದ ಮಸೂದೆಗೆ ಒಪ್ಪಿಗೆ ದೊರೆಯಿತಾದರೂ ಆಗ ಒಂದನೆಯ ಮಹಾಯುದ್ಧ ಅಡ್ಡ ಬಂತು.

ಯುದ್ಧಾನಂತರ ಐರ್ಲೆಂಡಿನ ಸ್ವಾತಂತ್ರ್ಯ ಹೋರಾಟ ಪ್ರಬಲವಾಯಿತು. ಷಿನ್ ಫೇನ್ ಪಕ್ಷದ ಗೆರಿಲ್ಲಾಗಳು ಸರ್ಕಾರಿ ಪಡೆಗಳೊಡನೆ ಕಾದಿದರು. 1921ರಲ್ಲಿ ಅವರೊಂದಿಗೆ ಒಪ್ಪಂದವಾಗಿ, ಉತ್ತರದ ಆರು ಕೌಂಟಿಗಳು ವಿನಾ ಉಳಿದ ಭಾಗಕ್ಕೆ ಸ್ವಾತಂತ್ರ್ಯ ಲಭಿಸಿತು. (ಉತ್ತರ ಐರ್ಲೆಂಡು ಉಳಿದ ಭಾಗದೊಂದಿಗೆ ಸೇರಲಿಲ್ಲ.) ಆಗ ಉದಿಸಿದ ಐರಿಷ್ ಸ್ವತಂತ್ರ ರಾಜ್ಯ ಕ್ರಮೇಣ ಬ್ರಿಟನ್ನಿನ ರಾಜಪ್ರಭುತ್ವದ ಸಂಕೇತವನ್ನೂ ಕಡಿದುಕೊಂಡಾಗ (1927) ಅದು ತಳೆದ ಹೆಸರೇ ಐರಿಷ್ ಗಣರಾಜ್ಯ.                  (ಪಿ.ಎಂ.ಯು.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ